ಸಂಕ್ಷಿಪ್ತ ಪರಿಚಯ

ಪೂಜ್ಯ ಶ್ರೀ ಸುರೇಂದ್ರ ಗುರೂಜಿಯವರ ಆಧ್ಯಾತ್ಮಿಕ ಜೀವನ ಮತ್ತು ಸೇವಾ ಕಾರ್ಯಗಳು

ಪೂಜ್ಯ ಶ್ರೀ ಸುರೇಂದ್ರ ಗುರೂಜಿ

ಜೀವನ ಚರಿತ್ರೆ

ಪೂಜ್ಯ ಶ್ರೀ ಸುರೇಂದ್ರ ಗುರೂಜಿಯವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಳತಗಿ ಗ್ರಾಮದಲ್ಲಿ ಶ್ರೀ ಸಿದ್ದಪ್ಪ ಮತ್ತು ಕಲ್ಲಮ್ಮ ದಂಪತಿಗಳ ಪವಿತ್ರ ಉದರದಿಂದ ದಿನಾಂಕ 25-09-1945 ರಲ್ಲಿ ಜನಿಸಿದರು. ಇವರಿಗೆ ಬಾಲ್ಯಾವಸ್ಥೆಯಿಂದಲೇ ಅಧ್ಯಾತ್ಮದ ಒಲವು ಇತ್ತು.

ಶಿಕ್ಷಣ

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗಳತಗಿ ಗ್ರಾಮದಲ್ಲಿಯೇ ಮುಗಿಸಿಕೊಂಡರು. ನಂತರ ಬೆಡಕಿಹಾಳ ಗ್ರಾಮದ ಬಿ. ಎಸ್. ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿಕೊಂಡರು. 1968 ರಲ್ಲಿ ಶ್ರೀ ರಾಜಾ ಲಖಮನಗೌಡ ವಿಜ್ಞಾನ ಮಹಾವಿದ್ಯಾಲಯದಿಂದ ತಮ್ಮ ಬಿ.ಎಸ್‍ಸಿ ಪದವಿಯನ್ನು ಮುಗಿಸಿಕೊಂಡರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಮ್.ಎಸ್‍ಸಿ ಪದವಿಯನ್ನು ಪಡೆದರು.

ಆಧ್ಯಾತ್ಮಿಕ ಪ್ರಭಾವ

ಪಿ.ಯು.ಸಿ. ಕ್ಲಾಸಿನಲ್ಲಿ ಓದುತ್ತಿರುವಾಗ, 'ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮೃತ್ಯು' ಲೇಖಕರು -ಶ್ರೀ ಶಿವಾನಂದ ಸ್ವಾಮಿಗಳು; 'ಆತ್ಮಾನ್ವೇಷಣೆ' ಲೇಖಕರು-ಭಗವಾನ್ ಶ್ರೀ ರಮಣ ಮಹರ್ಷಿಗಳು; 'ಪರಮಾತ್ಮಾನುಭವದ ಮಹಾರಣ್ಯಗಳಲ್ಲಿ' ಲೇಖಕರು -ಸ್ವಾಮಿ ರಾಮತೀರ್ಥರು; 'ವೇದಾಂತ ಜ್ಞಾನಸಿಂಧು' ಲೇಖಕರು- ಚಿದಾನಂದಾವಧೂತರು; 'ಸ್ವಾಮಿ ವೀವೆಕಾನಂದರ ಸಂಪೂರ್ಣ ಕೃತಿ ಶ್ರೇಣಿ' ಎಂಬ ಗ್ರಂಥಗಳು ಇವರ ಮನಸ್ಸಿನ ಮೇಲೆ ಅತಿ ಹೆಚ್ಚಿನ ಪರಿಣಾಮವನ್ನು ಬೀರಿದವು.

ಗುರು ಸಂಗ

ಪ್ರೊ|| ಸುರೇಂದ್ರರು:
ಜೀವ, ಜಗತ್ತು ಮತ್ತು ಈಶ್ವರ ಇವುಗಳ ನಡುವಿನ ಸಂಬಂಧವೇನು?
ಪೂಜ್ಯ ಶ್ರೀ ಗುರುದೇವ ಆತ್ಮಾನಂದರು:
ಜೀವ, ಜಗತ್ತು ಮತ್ತು ಈಶ್ವರ ಇವು ನಿಮ್ಮ ಸ್ವರೂಪದ ಆಧಾರದ ಮೇಲೆ ತೋರಿದ ತೋರಿಕೆಗಳು ಮಾತ್ರ.
ಪ್ರೊ|| ಸುರೇಂದ್ರರು:
ಅವು ನಮ್ಮ ಆಧಾರದ ಮೇಲೆ ತೋರಿದ ತೋರಿಕೆಗಳು ಎಂದು ನೀವು ಹೇಗೆ ಹೇಳುತ್ತೀರಿ?
ಪೂಜ್ಯ ಶ್ರೀ ಗುರುದೇವ ಆತ್ಮಾನಂದರು:
ಹಾಗೆ ಹೇಳಬೇಕಾದರೆ ಅದರ ವೈಯಕ್ತಿಕ ಅನುಭವವು ಇರಬೇಕಾಗುತ್ತದೆ.
ಪ್ರೊ|| ಸುರೇಂದ್ರರು:
ಹಾಗಾದರೆ ಆ ಅನುಭವವನ್ನು ನೀವು ಹೊಂದಿರುವಿರೋ?
ಪೂಜ್ಯ ಶ್ರೀ ಗುರುದೇವ ಆತ್ಮಾನಂದರು:
ಆ ಅನುಭವವನ್ನು ನಾನು ಹೊಂದಿಲ್ಲ, ಆದರೆ ನಮ್ಮ ತಂದೆಯವರಾದ ಪೂಜ್ಯ ಶ್ರೀ ಸದ್ಗುರು ಶಿವಾನಂದರು ಅಂಥ ಆತ್ಮಾನುಭವವನ್ನು (ತೂರ್ಯ ಸ್ಥಿತಿಯನ್ನು) ಹೊಂದಿದವರಾಗಿದ್ದರು. ಯಾರಾದರೂ ಅಂಥ ಸ್ಥಿತಿಯನ್ನು ಹೊಂದಿದ್ದಾರೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವ ಒರೆಗಲ್ಲು ನನ್ನಲ್ಲಿದೆ.

ವೈಯಕ್ತಿಕ ಜೀವನ

ಮಗನಿಗೆ ಪ್ರಾಧ್ಯಾಪಕ ಹುದ್ದೆಯು ದೊರಕುವದೇ ತಡ, ತಾಯಿ ಕಲ್ಲಮ್ಮನವರು ಮಗನ ಮದುವೆಯ ತಯಾರಿ ನಡೆಸಿದರು. ಆಗ ಶ್ರೀ ಸುರೇಂದ್ರರು ಮದುವೆಯಾಗಲು ಒಪ್ಪಲಿಲ್ಲ, ಅವರು ಸ್ವಾಮಿ ವಿವೇಕಾನಂದರಂತೆ ವೀರ ಸನ್ಯಾಸ ಜೀವನವನ್ನು ನಡೆಸಿ, ಆತ್ಮ ಸಾಕ್ಷಾತ್ಕಾರವನ್ನು ಮಾಡಿಕೊಂಡು, ಜನ್ಮಸಾರ್ಥಕ ಮಾಡಿಕೊಳ್ಳಬೇಕೆಂಬುದೇ ಅವರ ಧ್ಯೇಯವಾಗಿತ್ತು. ಆದರೆ ತಾಯಿ ಕಲ್ಲಮ್ಮನವರು ಹಠ ಹಿಡಿದರು, ಪ್ರೊ|| ಸುರೇಂದ್ರರು ಮದುವೆಯಾಗದಿದ್ದರೆ ತಾವು ಪ್ರಾಣತ್ಯಾಗ ಮಾಡುತ್ತೇವೆ ಎಂದು ಹೇಳಿ ವಿಷ ಸೇವಿಸಿದರು. ತಾಯಿಯವರ ಒತ್ತಾಯಕ್ಕೆ ಮಣಿದು ಪ್ರೊ|| ಸುರೇಂದ್ರರು ಕುಮಾರಿ ಶಕುಂತಲಾ ಎಂಬ ಪದವೀಧರೆಯ ಜೊತಗೆ 1972 ರಲ್ಲಿ ವಿವಾಹವಾದರು.

ಸೇವಾ ಕಾರ್ಯಗಳು

ಶ್ರೀ ಸುರೇಂದ್ರರು ತಮ್ಮನ ಹಾಗೂ ಮೂರು ಜನ ಸಹೋದರಿಯರ ಮದುವೆಯನ್ನು ಸ್ವಂತ ದುಡಿಮೆಯ ಖರ್ಚಿನಲ್ಲಿ ಮಾಡಿದರಲ್ಲದೆ, ಪಿತ್ರಾರ್ಜಿತ ಆಸ್ತಿಯಲ್ಲಿ ಯಾವ ಪಾಲನ್ನೂ ಕೇಳದೆ, ಮೂರು ಎಕರೆ ಹೊಲ ಹಾಗೂ ತಮ್ಮ ಮನೆಯನ್ನು ತಮ್ಮ ತಮ್ಮನಿಗೇ ಬಿಟ್ಟುಕೊಟ್ಟು, ಹಂಗರಕಿ ಆಶ್ರಮದ ಬದಿಯಲ್ಲಿಯೇ ಸ್ವಂತ ಖರ್ಚಿನಿಂದ ಮನೆಯನ್ನು ಕಟ್ಟಿಕೊಂಡು ಉಳಿದದ್ದು ಅವರ ತ್ಯಾಗಮಯ ಜೀವನಕ್ಕೆ ನಿದರ್ಶನವಾಗಿದೆ.

ಪ್ರಕಟಿತ ಕೃತಿಗಳು

1. 'ಆತ್ಮ ಸಾಕ್ಷಾತ್ಕಾರ'
2. 'ಪ್ರಥಮಾನುಭೂತಿ'
3. 'ಶಾಶ್ವತ ಶಾಂತಿ'
4. 'ಗುರಿ ಒಂದೇ ಸಾಧನೆ ಒಂದೇ'
5. 'ಗಾಢ ನಿದ್ರೆ ಮತ್ತು ಸಮಾಧಿ'
6. 'ಅವಿದ್ಯೆಯು ಅನಾದಿ ಅನಂತವಲ್ಲ, ಅದು ಸಾದಿ ಸಾಂತವು'
7. 'ಪೂಜ್ಯ ಶ್ರೀ ಗುರುದೇವ ಆತ್ಮಾನಂದರ ಪ್ರವಚನ ಸಂಗ್ರಹ'
8. 'ಪುನರ್ಜನ್ಮ'
9. 'ಆತ್ಮಾನಂದ ಬೋಧ'
10. 'ಪೂಜ್ಯ ಶ್ರೀ ಸದ್ಗುರು ಶಿವಾನಂದರ ಪ್ರವಚನ ಸಾರ'
11. 'ಪೂಜ್ಯ ಶ್ರೀ ಸ್ವಾಮಿ ರಾಮತೀರ್ಥರ ಪ್ರವಚನ ಸಾರ'
12. 'ಓಂ ನಮಃ ಸುಖಾಯ ಮಂತ್ರದ ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿಯ ಪೂಜ್ಯ ಶ್ರೀ ಗುರುದೇವ ಆತ್ಮಾನಂದರ ಪ್ರವಚನಗಳು'
13. 'ಅಧ್ಯಾತ್ಮ ಪ್ರಶ್ನೋತ್ತರ ಸಂಗ್ರಹ'

ಅಧ್ಯಾತ್ಮ ಕೇಂದ್ರಗಳು

ಇವರು ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಅನೇಕ ಅಧ್ಯಾತ್ಮ ಕೇಂದ್ರಗಳನ್ನು ಸ್ಥಾಪಿಸಿ, ಮೇಲಿಂದ ಮೇಲೆ ಅಲ್ಲಿಗೆ ಹೋಗಿ ಪ್ರವಚನಗೈದು, ದಿನನಿತ್ಯವೂ ಆ ಎಲ್ಲ ಕೇಂದ್ರಗಳಲ್ಲಿ ಅಧ್ಯಾತ್ಮ ವಿಚಾರವು ಮುಂದುವರಿಯುವದಕ್ಕೆ ಕಾರಣಿಭೂತರಾಗಿದ್ದಾರೆ.

ಧಾರವಾಡ ತಾಲೂಕಿನ ಮುಗಳಿ
ಹೊಸೆಟ್ಟಿ
ಕಲ್ಲಾಪೂರ
ಕೊಟಬಾಗಿ
ಧಾರವಾಡ
ಲೋಕೂರ
ಬೆಳಗಾವಿ ಜಿಲ್ಲೆಯ ಬಸರಕೋಡ
ಗುಂಡೇನಟ್ಟಿ
ಬೆಳಗಾವಿ
ಶಿವಪೇಠ

ಆದರ್ಶ ಮತ್ತು ತತ್ವಗಳು

ಇವರು ಯಾವುದೇ ಜಾತಿ ಧರ್ಮ ಮತ ಪಂಥ ಸಾಂಪ್ರದಾಯಗಳ ಬೇಧವಿಲ್ಲದೆ, ಬಡವ ಶ್ರೀಮಂತ, ರಾಜ ರಂಕ ಎಂಬ ಬೇಧವಿಲ್ಲದೆ, ಎಲ್ಲರನ್ನೂ ಸಮಭಾವದಿಂದ ದೇವಭಾವದಿಂದ ನೋಡುತ್ತಿರುವದು ಇವರ ಆದರ್ಶವಾಗಿದೆ. 'ದೇವರು ದೀನ ದಲಿತರ ಹಾಗೂ ಶೋಷಿತರ ಹೃದಯದಲ್ಲಿ ಇರುತ್ತಾನೆ, ಅವರ ಸೇವೆಯನ್ನು ಮಾಡುವದೇ ಈಶ್ವರ ಪೂಜೆಯಾಗಿದೆ' ಎಂದು ಅವರು ಮನಗಂಡು ಆಚರಿಸುತ್ತಿದ್ದಾರೆ.

"ವಿಶ್ವವೆ ಮಂದಿರ, ಜೀವರೆ ದೇವರು, ನಾವೇ ಪೂಜಾರಿಗಳು"

ಕುಟುಂಬ

ಶ್ರೀ ಸುರೇಂದ್ರರ ಪತ್ನಿಯಾದ ಶ್ರೀಮತಿ ಶಕುಂತಲಮ್ಮನವರು ಶ್ರೀ ಸುರೇಂದ್ರರ ಎಲ್ಲ ಸೇವಾ ಕಾರ್ಯಗಳಲ್ಲಿ ಸರ್ವ ರೀತಿಯಿಂದಲೂ ಸಹಕರಿಸಿದ್ದಾರೆ. ಇವರಿಗೆ ಮೂರು ಜನ ಹೆಣ್ಣು ಮಕ್ಕಳು; (ವನಜಾ, ಭಾರತಿ, ಜ್ಯೋತಿ) ಇವರೆಲ್ಲರೂ ವಿದ್ಯಾವಂತರು, ಅವರೆಲ್ಲರ ಲಗ್ನವು ಆಗಿದೆ, ಇವರಿಗೆ ಮಕ್ಕಳೂ ಆಗಿದ್ದಾರೆ.